ವ್ಯಾಂಡಲರು
	ರೋಮನ್ ಚಕ್ರಾಧಿಪತ್ಯದ ವನ್ಯಪ್ರದೇಶದಲ್ಲಿ ವಾಸವಾಗಿದ್ದ ಟ್ಯೂಟಾನಿಕ್ ಗುಂಪಿಗೆ ಸೇರಿದ ಜನಸಮೂಹ. ರೋಮನ್ ಸಾಮ್ರಾಜ್ಯದ ಕೊನೆಯ 200 ವರ್ಷಗಳಲ್ಲಿ ಈ ಜನ ದಾಳಿಮಾಡಿದರು. ಚಕ್ರವರ್ತಿ ಆರೇಲಿಯಸ್ ಪ್ರಬಲನಾದ್ದರಿಂದ ಇವರನ್ನು ಡ್ಯಾನ್ಯೂಬ್ ನದಿಯಿಂದಾಚೆಗೆ ಓಡಿಸಿದ. 404ರಲ್ಲಿ ಇವರು ಇಟಲಿಯಿಂದ ನಿರ್ಗಮಿಸಿ ದರು. ರೋಮನ್ ಚಕ್ರವರ್ತಿ ಹಾನೋರಿಯಸ್ ತನ್ನ ರಾಜಧಾನಿಯನ್ನು ರಾವೆನ್ನಪಟ್ಟಣಕ್ಕೆ ವರ್ಗಾಯಿಸಿದ ಮರುವರ್ಷವೇ ರಡಗಾಸಿಯಸ್ ಎಂಬ ಕ್ರೂರಿಯೂ ದುಷ್ಟನೂ ಆದ ಇವರ ನಾಯಕ ತನ್ನ ಪಡೆಯೊಡನೆ ರೋಮಿಗೆ ದಾಳಿಯಿಟ್ಟ. ರೋಮನರ ನಾಯಕ ಸ್ಟಿಲಿಕೋ ಎಂಬಾತ ಇವರನ್ನು ಸೋಲಿಸಿದ. ಈ ಸಮರದಲ್ಲಿ ಟ್ಯೂಟಾನಿಕ್ ಸೈನ್ಯದಲ್ಲಿ 30,000 ಯೋಧರು ಕೊಲೆಯಾದರು. ಗಾಥರ ನಾಯಕ ಅಲಾರಿಕ್ ಎಂಬವನೊಡನೆ ಪಿತೂರಿ ನಡೆಸುತ್ತಿರುವನೆಂದು ಹಾನೋರಿಯಸ್ ರಡಗಾಸಿಯಸ್‍ನನ್ನು ಕೊಂದು ಹಾಕಿದ. ಅಲಾರಿಕನಿಗೆ ಕೋಪವುಂಟಾಗಿ ಅವನು ರೋಮ್ ಮೇಲೆ ದಾಳಿ ಮಾಡಲು ನಿಶ್ಚಯಿಸಿದ. 408ರಲ್ಲಿ ಆಲ್ಪ್ಸ್ ಪರ್ವತ ದಾಟಿದ ಅನಂತರ ಮಾರ್ಗದ ಹಳ್ಳಿ ಮತ್ತು ಪಟ್ಟಣದ ಜನರನ್ನೆಲ್ಲ ಕೊಂದ. ಅಲಾರಿಕ ರೋಮಿಗೆ ಬಂದೊಡನೆಯೇ ಸ್ಟಿಲಿಕೋನ ಪತ್ನಿ ಸೆರಿನ ಅವನಿಗೆ ಸಹಾಯ ಮಾಡುವಳೆಂಬ ಉದ್ದೇಶದಿಂದ ಆಕೆಯನ್ನು ರೋಮನರು ಕೊಂದರು. ಅಲಾರಿಕ ರೋಮ್ ನಗರವನ್ನು ಸಂಪೂರ್ಣವಾಗಿ ಕೊಳ್ಳೆಹೊಡೆದ. ನಗರದಲ್ಲಿ ಚರ್ಚುಗಳನ್ನುಳಿದು ಆರು ದಿನ ಲೂಟಿ ನಡೆಯಿತು. ನಗರ 9 ತಿಂಗಳು ಶತ್ರುಗಳ ಅಧೀನದಲ್ಲಿತ್ತು. ಪ್ರತಿದಿನವೂ ಹಿಂಸೆ ಮತ್ತು ವ್ಯಭಿಚಾರ ನಡೆದುವು.  ಎಡ್ವರ್ಡ್ ಗಿಬ್ಬನ್ ಎಂಬಾತ ರೋಮ್ ನಗರದ ನಾಶವನ್ನು ಬಹಳ ವ್ಯಥೆಯಿಂದ ತನ್ನ ಗ್ರಂಥದಲ್ಲಿ ವಿವರಿಸಿದ್ದಾನೆ. ಅನೈತಿಕ ಕಾರ್ಯಗಳಿಗೆಲ್ಲ ಸಮಯ ಒದಗಿತ್ತು. ಬಂಗಾರದ ಆಭರಣ, ಬೆಲೆಬಾಳುವ ಕಲಾ ವಸ್ತುಗಳು, ವಸ್ತ್ರಗಳು ಮೊದಲಾದ ಸಾಮಗ್ರಿ ಲೂಟಿಯಾದುವು. ಮುಂದೆ ಇವರು ಆಫ್ರಿಕ ಖಂಡದ ಕಡೆಗೆ ಹೊರಟರು. ದಾರಿಯಲ್ಲಿ ಸ್ಪೇನಿನ ಅನೇಕ ಪ್ರಾಂತಗಳನ್ನು ಗೆದ್ದರು. ಸ್ಪೇನಿನ ಒಂದು ಪ್ರಾಂತಕ್ಕೆ ಈಗಲೂ ವ್ಯಾಂಡಲೂಸಿಯ ಎಂಬ ಹೆಸರಿದೆ. 439ರಲ್ಲಿ ಜೆಸರಿಕ್ ಎಂಬಾತ ಆಫ್ರಿüಕದಲ್ಲಿದ್ದ ರೋಮನ್ ಸಾಮ್ರಾಜ್ಯದ ಭಾಗಗಳನ್ನು ಸ್ವಾಧೀನಪಡಿಸಿಕೊಂಡ. ಕಾರ್ಥೆಜನ್ನು ಮುಖ್ಯ ಪಟ್ಟಣವಾಗಿಟ್ಟುಕೊಂಡು ಹೊಸ ರಾಜ್ಯ ಸ್ಥಾಪಿಸಿದ. 455ರಲ್ಲಿ ಇವರು ಕಾರ್ಥೆಜಿನಿಂದ ಹೊರಟು ಟೈಬರ್‍ನದಿ ದಾಟಿ, ಪೋಪ್ ಪ್ರಾರ್ಥಿಸಿದರೂ ಕೇಳದೆ ರೋಮ್ ನಗರವನ್ನು ಲೂಟಿಮಾಡಿದರು. 476ರಲ್ಲಿ ಓಡೇಸರ್ ಎಂಬಾತ ಪಶ್ಚಿಮ ರೋಮ್‍ಅನ್ನು ಸಂಪೂರ್ಣವಾಗಿ ನಾಶಪಡಿಸಿ, ಪೂರ್ವ ರೋಮಿನ ಚಕ್ರವರ್ತಿಯ ಪ್ರತಿನಿಧಿಯಾಗಿ ಆಳಿಕೆ ಪ್ರಾರಂಭಿಸಿದ.			
				*

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ